ನೆರಳು


ನನ್ನ ನೆರಳು ನನ್ನದೇ ಎನ್ನುವ ಭ್ರಮೆ ಎಲ್ಲರಿಗೂ
ಕತ್ತಲೆಯು ಕಸಿದುಕೊಳ್ಳುವದೆಂದು
ತಿಳಿದಿದ್ದರೂ ಅಲ್ಲಗಳೆಯುತ್ತೇವೆ
ಈ ದೇಹದ ನೆರಳದು..
ನೆರಳು ನನ್ನದೆನ್ನಲು, ದೇಹ ನನ್ನದೇ?
ಅಥವಾ ತಿಳಿದಿರದ ಅವಧಿಗೆ ಬಾಡಿಗೆಗೆ ಪಡೆದಿರುವದೇ?
ಅರೆ ಏನಿದು ಛಾಯೆ
ಏಕೆ ಎಲ್ಲವನ್ನು ಅಸ್ಪಷ್ಟಗೊಳಿಸಿದೆ
ಕತ್ತಲಾದ ತಕ್ಷಣ ಬಿಟ್ಟು ಹೋಗುವ ನೆರಳು
ಒಂದು ದಿನ ಈ ದೇಹವನ್ನೇ
ಸುಟ್ಟು ಹೋಗುವ ಜನರು
ನೆರಳಾಟವೋ ಇದು ನರಳಾಟವೋ
ಎಷ್ಟೊಂದು ನೆರಳುಗಳು
ದಿನಾಲೂ ಸೃಷ್ಟಿಯಾಗುತ್ತಿವೆ
ಎಷ್ಟೊಂದು ನೆರಳುಗಳು
ದಿನಾಲೂ ಮಾಯವಾಗುತ್ತಿವೆ
ಕೆಲವು ಮನೆಕಟ್ಟುತ್ತಿವೆ
ಕೆಲವು ಕಾರು ಖರೀದಿಸುತ್ತಿವೆ
ಕೆಲವು ಪಕ್ಷಕಟ್ಟುತ್ತಿವೆ
ಕೆಲವು ಪ್ರತಿಭಟನೆ ಮಾಡುತ್ತಿವೆ
ಕೆಲವು ಭಾಷಣ ಬಿಗಿಯುತ್ತಿವೆ
ಕೆಲವು ಹಿಂಡು ಹಿಂಡಾಗಿ ಜೈಕಾರ ಹಾಕುತ್ತಿವೆ
ಕೆಲವು ಮೂರ್ತಿ ನಿಲ್ಲುಸುತ್ತಿವೆ
ಕೆಲವು ಉರುಳಿಸುತ್ತಿವೆ
ಇನ್ನೂ ಕೆಲವು ಗನ್ ಖರೀದಿಸುತ್ತಿವೆ
ಮತ್ತೆ ಹಲವು ಬೆನ್ನಿಗೆ ಬಾಂಬು ಕಟ್ಟಿಕೊಳ್ಳುತ್ತಿವೆ
ಎಂಥ ನೆರಳಿನಾಟವಿದು ಜಗತ್ತು
ಪರದೆ ಬೀಳುವದು ಯಾವತ್ತು

(Uttam’s pen)

ಮನದ ಗಲಭೆ

ಮನದ ಗಲಭೆಗಳು ಸುಲಭವಾಗಿ ಶಾಂತವಾಗುವದಿಲ್ಲ
ನಿನ್ನ ಕಿರುನೋಟ ಮೂಡಿಸುತ್ತಿರುವ ಮುಗುಳ್ನಗು ಅಂತರಂಗದ ಪ್ರತಿಬಿಂಬವಲ್ಲ
ನೀನು ಸೂರ್ಯನಂತೆ ಪ್ರಕಾಶಮಾನವಾಗಿರುವೆ ನಿಜ
ಆದರೆ ನನ್ನ ನೋವುಗಳು ಇಬ್ಬನಿಯ ಹನಿಗಳಲ್ಲ
ನಿನ್ನ ಸಾಮೀಪ್ಯ ನೀಡುವ ಮರೆವಿನ ಮದ್ದು ಅಸ್ಥಾಯಿ
ಅರೆಗಳಿಗೆಯಲ್ಲಿ ಮರಳುವದು ಆ ವಿವಶತೆಯ ಮರಳು
ಸಾಗರದಾಚೆ ತೆರೆಗಳನ್ನು ಎಣಿಸುವದಷ್ಟೇ ನನ್ನ ಆಟ
ತೆರೆಗಳ ಹುಟ್ಟು ಸಾವು ಅದೆಲ್ಲೋ ಅವಿತ ಕಾಣದ ಕೈಗಳ ಮಾಟ

(Uttam’s pen)

ಕನ್ನಡ ವೆಂಬ ಕನ್ನಡಿ

ಕನ್ನಡವೆಂಬ ಕನ್ನಡಿಯೊಂದು
ನನ್ನಯ ಬಿಂಬವ ಹಿಡಿದಿಹುದು
ಕನ್ನಡವಿಲ್ಲದೆ ನಾನಿರೆ ಚೆಲುವೆ
ಅದರಲಿ ಜೀವ ಅಡಗಿಹುದು

ಕನ್ನಡ ಪದವದು ಬೆಲ್ಲದ ಚೂರು
ನಾಲಿಗೆ ಮೇಲೆ ಕರಗುವದು
ಕನ್ನಡ ಹಾಡದು ತಂಪಿನ ಗಾಳಿ
ನನ್ನೀ ಹೃದಯವು ತೇಲಿಹುದು

ಕನ್ನಡ ಮಾತದು ಸಿಹಿ ಸಿಹಿ ಸಕ್ಕರೆ
ಆಡಲು ಹೊಮ್ಮಿದೆ ಸವಿ ಸವಿ ಅಕ್ಕರೆ
ಕನ್ನಡ ಲಿಪಿಯದು ಹೂವಿನ ಹಂದರ
ಮಲ್ಲಿಗೆ ಸಂಪಿಗೆ ಚಿಗುರೆಲೆ ಮಾಮರ

ಕನ್ನಡ ಜನರದು ಮೃದು ಮೃದು ಮನವು
ಜನಜನಕೂ ಗೌರವ ನೀಡುವ ಗುಣವು
ಬಾಳಿ ಬದುಕಿಸುವ ಸಂಜೀವಿನಿವನವು
ಮೆರೆದಿದೆ ಹಿರಿತನ ಕನ್ನಡತನವು
(Uttam’s pen)

ಈ ಹಾಡಿನ video ವೀಕ್ಷಿಸಲು

Click ಮಾಡಿ

Kannadavemba Kannadi

Like Share Comment and Subscribe ಮಾಡಿ

ಜಗನ್ಮಾತೆ

ಕಷ್ಟಗಳನು ನೀಡದಿರೆಂದು ಕೇಳಲಾರೆ
ಕಷ್ಟದಲಿ ಕುಸಿದು ಬೀಳದಂತಿರಿಸು
ಕಣ್ಣೀರು ಬರಿಸದಿರೆಂದು ಹೇಳಲಾರೆ
ಒರೆಸಿ ಮುಗುಳ್ನಗುವಂತೆ ಹರಸು
ಐಶ್ವರ್ಯ ಕೊಡು ಎಂದೇಕೆ ಕೇಳಲಿ
ಗಳಿಸಿದ್ದು ಸಾಕಾಗುವಂತೆ ಮಾಡು
ಆಯಸ್ಸು ಬೆಳೆಸು ಎಂದ್ಹೇಗೆ ಹೇಳಲಿ
ಜೀವನಕೆ ಅರ್ಥವಿರುವಂತೆ ಮಾಡು
ಪ್ರತಿಕ್ಷಣದ ಅನುಭವವ ಆಸ್ವಾದಿಸುವ ಬಯಕೆ ನನಗೆ
ನೀನಿರು ಪ್ರತಿ ದಿನ ಪ್ರತಿಘಳಿಗೆ ನನ್ನೊಳಗೆ

(Uttam’s pen)
ವಿಜಯದಶಮಿಯ ಶುಭಾಶಯಗಳು

ನೀನು ಒಳ್ಳೆಯವನೆಂದು …

ನೀನು ಒಳ್ಳೆಯವನೆಂದು ಸಬೂಬು ನೀಡಬೇಡ
ನಿನ್ನ ಸ್ನೇಹವನ್ನು ಸಾಬೀತು ಪಡಿಸಬೇಡ
ನಾ ಕೆಟ್ಟವನೆಂದು ತಾಕೀತು ಮಾಡಬೇಡ
ನೀನು ಪಸಂದು ನನಗೆ ನೀನಿದ್ದಂತೆ
ನನ್ನನ್ನು ಬದಲಿಸಲು ಕೋಶೀಶು ಮಾಡಬೇಡ

ಯಾರ ತಪ್ಪು ?

ಯಾರ ತಪ್ಪು ?
ನನ್ನಲ್ಲಿ ಪ್ರೀತಿ ಹುಟ್ಟಿತು ನಿನ್ನನ್ನು ಕಂಡು
ನೀನಂದುಕೊಂಡೆ ತಪ್ಪೆಲ್ಲ ನನ್ನದೇ ಎಂದು
ನಾ ಹೇಳಿದೆನೆ
ನಿನ್ನ ಕಂಗಳಿಗೆ ಕನಸಲ್ಲಿ ಬಾ ಎಂದು?
ನಿನ್ನ ಕೇಶರಾಶಿಗೆ ಪರಿಮಳ ಬೀರೆಂದು?
ನಿನ್ನ ಸೆರಗಿಗೆ ನಾನು ಹಾರೆಂದೆನೆ?
ಬೇಡಿಕೊಂಡೆನೆ ನಿನ್ನ
ಸಿಂಗರಿಸಿ ಬಾ ಎಂದು?
ಮತ್ತೇಕೆ ನಿನ್ನ ಕಂಗಳು ಸೃಷ್ಟಿಸಿದವು ಕನಸಿನ ಲೋಕವನು?
ನಿನ್ನ ಮುಂಗುರುಳು ನಿರ್ಮಿಸಿತೇಕೆ ಮಾಯಾಜಾಲವನು ?
ನಿನ್ನ ಸೆರಗು ಏಕೆ ತೇಲಿಸಿತು ನನ್ನ ಹೃದಯವನು?
ಮತ್ತೇಕೆ ನೀನು ಕದ್ದೆ ನನ್ನಿಂದಲೇ ನನ್ನನು?

ಸೂರ್ಯನು ಜಾಗ

ಸೂರ್ಯನು ಜಾಗ ಬದಲಾಯಿಸಿದ
ಅಕ್ಕ ಸಜ್ಜಿ ರೊಟ್ಟಿ ಬೇಯಿಸಿದಳು
ಅವ್ವ ಮಾದೇಲಿ ಮಾಡಿದಳು
ತಂಗಿ ಗುರೆಳ್ಳು ಚಟ್ನಿ ಕುಟ್ಟಿದಳು
ಹೆಂಡತಿ ಪ್ಲೇಟಿಗೆ ಹಾಕಿದಳು
ನಾನು ತಿಂದೆನು
ಎಂಬಲ್ಲಿಗೆ ಸಂಕ್ರಾಂತಿ ಪರ್ವದ
ಭೋಜನ ಅಧ್ಯಾಯ
ಸಮಾಪ್ತವಾಯಿತು

ಧೃಡ ನಿಶ್ಚಯ

ಕೆಲಸವನ್ನು
ನಾಳೆ ಮಾಡಿಯೇ
ತೀರಿಸುತ್ತೇನೆ
ಎಂಬ ಧೃಡ ನಿಶ್ಚಯದೊಂದಿಗೆ
ನಾನು ಇವತ್ತು ಏನೂ
ಮಾಡಲಿಲ್ಲ

ಕನಸು

ನಿನ್ನೆ
ಕನಸೊಂದು
ಕಣ್ಣ ರೆಪ್ಪೆಗಳಲ್ಲಿ ಸಿಕ್ಕು ಒದ್ದಾಡುತ್ತಿತ್ತು
ಇಂದು
ಮನಸಲಿ ಇಳಿದು ನಲಿದಾಡುತ್ತಿದೆ
ನಾಳೆ
ನನಸಾಗ ಬೇಕೆಂದು
ಹೋರಾಡುತ್ತಿದೆ

(Uttam’s pen)

photo courtesy: Noelle Buske (flikr.com)

 

ಬದುಕಿನ ಪುಸ್ತಕ

ನನ್ನ ಮನಸಿನ ಕಥೆಯ ಕೆಲವು ಹಾಳೆಗಳ ಬಣ್ಣ ವಿಭಿನ್ನವಾಗಿದೆ

ಕೆಂಪಾಗಲು ಹೋಗಿ ಹಸಿರಾದವೋ ಹಸಿರಾಗಲು ಹೋಗಿ ಕೆಂಪಾದವೋ ಗೊತ್ತಿಲ್ಲ

ಒಂದು ದಿನ ಕಿತ್ತು ಎಸೆದೆ ಆ ಹಾಳೆಗಳನ್ನು

ಕೆಲ ದಿನಗಳ ನಂತರ ನೋಡಿದೆ

ಅವು ಎಲ್ಲಿಯೂ ಹೋಗಿಲ್ಲ

ಅಲ್ಲೇ ಭದ್ರವಾಗಿವೆ ! ! !

ಬದುಕಿನ ಪುಸ್ತಕದ ಪುಟಗಳೇ ಹಾಗೆ

ಹರಿಯಲು ಆಗದು ಸುಡಲು ಆಗದು

ಈ ಪುಸ್ತಕದಲ್ಲಿ

ವಿಸ್ಮಯ ಚಿತ್ರಗಳಿವೆ ಸುಂದರ ಕವನಗಳೂ ಇವೆ

ಆದರೆ ಬದುಕು ಕಲಿಸಿದ ಪಾಠಗಳೇ ಹೆಚ್ಚು

ರಚನೆ : ಉತ್ತಮ ಸಿ ಯಲಿಗಾರ