ಮರಳಿ ಬರಲೇ ಮರವೇ ….!

ಮರಳಿ ಬರಲೇ ಮರವೇ …..!

ಮರವೇ ! ಮರವೇ ! ಪ್ರೀತಿಯ ಮರವೇ

ಎಲ್ಲ ಮರೆಸುವ ಮತ್ತಿನಂತೆ ನೀ ಮರವೇ ….

ಹಣ್ಣು ಕೊಟ್ಟು, ಹೂವು ಕೊಟ್ಟು, ನೆಳಲು ಕೊಟ್ಟು

ಸಲಹುವೆ ಎಲ್ಲರ ಸದಾ ಕಣ್ಣಲ್ಲಿ ಕಣ್ಣಿಟ್ಟು

ಏನಿಲ್ಲವೆಂದರೂ ಕೊಂಬೆ ಕೊಂಬೆ ಕೊಟ್ಟು

ನನ್ನ ಗೊಂಚಲು ಹುಲ್ಲಿಗೆ ಜಾಗ ಕೊಟ್ಟು

ಗೂಡು ಕಟ್ಟಲು ಬಿಟ್ಟು ಕೆರೆದೆಯೆನ್ನ ಕೈ ಕೊಟ್ಟು

ಹಕ್ಕಿಯು ನಾನು ನಿನ್ನ ಕಚ್ಚುತ್ತಿದ್ದ

ಹುಳುಗಳನ್ನೆಲ್ಲ ಕುಕ್ಕಿ ಕುಕ್ಕಿ

ಹೆಕ್ಕಿ ತೆಗೆದು , ಸಾಕಾಯ್ತು

ಸಾಕಾಯ್ತು ನಿನ್ನೊಡನೆ ನಕ್ಕು ನಕ್ಕು

ಹೀಗಿರಲು

ಗೆಳೆಯನ ಕರೆತಂದೆ

ಕಟ್ಟಿದ ಗೂಡಲಿ ಬೀಡನು ಬಿಟ್ಟು

ಹಾಡುತ ಹಾರುತ ಕಾಲವ ಕಳೆಯುತ

ಮರಿಗಳ ಮಾಡುತ

ಪ್ರೀತಿಯನುಣಿಸುತಲಿರಲು

ಹಾಯಾಗಿ

ರೆಕ್ಕೆಯು ಬಲಿಯಿತು ಹಕ್ಕಿಗಳೂ ಹಾರಿದವು

ಕಡೆಗೆ ಉಳಿದೆ ನಾನೊಬ್ಬಳೇ

ನಿನ್ನೊಡಲ ಗೂಡಲ್ಲಿ

ಪ್ರಕೃತಿಯ ಮಡಿಲಲ್ಲಿ

ರಚನೆ: ನಳಿನಿ ವಿಜಯಕುಮಾರ್

(ಉತ್ತಮ ಯಲಿಗಾರ ಅವರ ಸೌಂದರ್ಯ ಕವಿತೆಯ blogpost ನಲ್ಲಿ ಉಪಯೋಗಿಸಿದ ಚಿತ್ರದ ಸ್ಪೂರ್ತಿಯಿಂದ)