ಭಟ್ಟರ ಬುಟ್ಟಿಯಿಂದ –II

ಭಟ್ಟರ ಬುಟ್ಟಿಯಿಂದ -II

ಸಂಘರ್ಷ


ನಾವೇ ಹಾಕಿಕೊಂಡಿದ್ದೇವೆ

ದೇಶ ಭಾಷೆಯ ಗಡಿ

ಜಾತಿ ಧರ್ಮದ ಗಡಿ

ಪ್ರಕೃತಿಯಲ್ಲಿ

ಭೂಮಿ ನೀರಿಗೆ ಎಲ್ಲಿದೆ ಗಡಿ?

ಮಾನವೀಯತೆಯಿಂದ

ಇವನ್ನೆಲ್ಲ ಕಳಚಿ ಬಿಡಿ!

ಆಗ ಇರುತ್ತದೆಯೇ?

ಹೊಡಿ! ಬಡಿ!

ವ್ಯಾಪಾರ


ಜೀವನದ ವ್ಯಾಪಾರ ಅಂತ್ಯಗೊಳ್ಳುವಷ್ಟರಲ್ಲಿ

ನೋಡಬೇಕಂತೆ ಕಾಶಿ

ಆದರೆ ದೈನಂದಿನ ವ್ಯಾಪಾರ

ವ್ಯವಹಾರಗಳಿಗೆ ಬೇಕೇಬೇಕು ಚೌಕಾಶಿ

ದಾನ


ಸಾಲ ಕೊಡುವಾಗ ಭಾವಿಸಬೇಕು

ನಾನು ಕೊಡುತ್ತಾ ಇರುವದು ದಾನ

ಏಕೆಂದರೆ ತೆಗೆದು ಕೊಂಡವ

ಆಗಿಯೇ ಬಿಡುತ್ತಾನೆ ಅಂತರ್ಧಾನ!

ಗು-ಲಾಬಿ


ಈಗ ಹಣ ಮಾಡಲು ನಡೆಯುತ್ತಿರುವದು

ನೂರೆಂಟು ಲಾಬಿ

ಹೇಗೆ ಅರಳುತ್ತದೆ

ಸ್ವಾರ್ಥದ ಮುಳ್ಳಿನ ಮೇಲೆ

ಸಂತೋಷದ ಗುಲಾಬಿ?

ಅರಿವು


ಭ್ರಷ್ಟರಿಗೆ ನೂರಾರು ರೀತಿಯ

ಹಣದ ಒಳಹರಿವು

ಕಾಣೆಯಾಗಿರುವದು ಅವರ ಒಳ – ಅರಿವು

ರಚನೆ: ಮಹಾಬಲೇಶ್ವರ ಭಟ್ಟ

ನುಡಿ ಸಿಂಗಾರ

ನುಡಿ ಸಿಂಗಾರ

 

ಕನ್ನಡದೊಡವೆಯ ತೊಡುತಿಹೆ ನಾನು

ಒಡಲಿಗೆ ಅದುವೆ ಸಿಂಗಾರ

ಕನ್ನಡನುಡಿಯೆಂದದರಾ ಹೆಸರು

ಉಸಿರನು ಕೊಡುವದೆ ಬಂಗಾರ?

 

ಕಿವಿಗೆ ತೊಡಿಸಿದೆನು ಪಂಪನ ಓಲೆ

ಕೈಗಳಿಗೋ ರನ್ನನ ಬಳೆಯು

ವಚನದ ಮುತ್ತಿನ ಹಾರದ ನಡುವೆ

ಬೆಳಗಿದೆ ದಾಸರ ಮಣಿ ಮಣಿಯೂ ||೨||

 

ಛಂದೋಮಾಲೆಯ ನಡುವಿನಲಿಹುದು

ಹೊಳೆ ಹೊಳೆಯುವ ಆ ಶಬ್ದಮಣಿ

ಒಂದೇ ಎರಡೇ ಎಣಿಸಲಾಗದು

ಹುಡುಕಿದರನಿತೂ ಸಿಗುವ ಗಣಿ ||೩|| 

ಭಾಮಿನಿಯದು ನಲು ನುಡಿಯಂತೆಸೆವ

ಕಾಮನೆ ತಣಿಸುವ ಕುಸುಮ ಶರ

ವಾರ್ಧಕ್ಯದೊಳು ಭಾವನೆ ಸ್ಫುರಿಸುವ

ಸಾರ್ಥಕ ಬದುಕಿನ ಜೀವಸ್ವರ ||೪||

 

ಕನ್ನಡದೊಲವಿನ ತೊಡುಗೆಯೇ ಸಾಕು

ಕನ್ನಡಿಯೇತಕೆ ಸಿಂಗರಕೆ

ವರಕವಿಗಳ ನುಡಿಗಣದ ಬಿಂಬಕೆ

ನಮನವಿದೋ ಆ ದರ್ಶನ ಕೆ ||೫||

 

(ರಚನೆ: ಭ ರಾ ವಿಜಯಕುಮಾರ )

 

 

 

 

 

 

ಕವಿ ಪರಿಚಯ :

ಪ್ರಸ್ತುತ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಭ ರಾ ವಿಜಯಕುಮಾರ್ ಅವರು ಕನ್ನಡ ಸಾಹಿತ್ಯರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕವನವು ಅವರ ಪ್ರಥಮ ಕವನ ಸಂಕಲನವಾದ ಪಂಜರದೊಳಗೂ ಇಂಚರ ದಲ್ಲಿ ಪ್ರಕಟಗೊಂಡಿದ್ದು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿದೆ.